ಡಾ. ಶ್ರೀನಿವಾಸ್ ಎನ್. ಟಿ. ಅವರ ಬಗ್ಗೆ
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ನರಸಿಂಹಗಿರಿ ಗ್ರಾಮದ ದಿವಂಗತ ಬೊಮ್ಮಣ್ಣ ಎನ್. ಟಿ. ಹಾಗೂ ಓಬಮ್ಮ ದಂಪತಿಯ ಪುತ್ರರಾದ ಡಾ. ಶ್ರೀನಿವಾಸ್ ಎನ್. ಟಿ. ಅವರು ಗ್ರಾಮೀಣ ಹಿನ್ನೆಲೆಯಿಂದ ಬೆಳೆದು, ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹೆಮ್ಮೆಯ ವೈದ್ಯರು ಹಾಗೂ ಜನಪ್ರತಿನಿಧಿಯಾಗಿದ್ದಾರೆ.
ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲೇ ಪೂರ್ಣಗೊಳಿಸಿದ ಅವರು, ಪ್ರೌಢಶಿಕ್ಷಣ ಹಾಗೂ ಪಿಯುಸಿ ಶಿಕ್ಷಣವನ್ನು ಸಂಡೂರು ರೆಸಿಡೆನ್ಶಿಯಲ್ ಶಾಲೆಯಲ್ಲಿ ಪಡೆದರು. ಇದೇ ಶಾಲೆಯಲ್ಲಿ ಅವರು ಪ್ರಸ್ತುತ ಕರ್ನಾಟಕದ ಸಚಿವರಾದ ಶ್ರೀ ಸಂತೋಷ್ ಲಾಡ್ ಅವರ ಸಹಪಾಠಿಯಾಗಿದ್ದರು.
ಡಾ. ಶ್ರೀನಿವಾಸ್ ಎನ್. ಟಿ. ಅವರು ಡಾ. ಪುಷ್ಪಾ ಅವರನ್ನು ವಿವಾಹವಾಗಿದ್ದು, ಸಂತೋಷದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಇವರಿಗೆ ಮಾಸ್ಟರ್ ದೈವಿಕ್ ಎಂಬ ಪುತ್ರನಿದ್ದಾರೆ.
ಡಾ ಶ್ರೀನಿವಾಸ್ ಎನ್ ಟಿ ರವರು ಪ್ರತಿಷ್ಠಿತ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ MBBS ಪದವಿ ಪಡೆದರು. ನಂತರ ದೇಶದ ಅತ್ಯಂತ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳಲ್ಲಿ ಒಂದಾದ AIIMS, ನವದೆಹಲಿಯಲ್ಲಿ ನೇತ್ರವಿಜ್ಞಾನದಲ್ಲಿ ಉನ್ನತ ವೈದ್ಯಕೀಯ ಶಿಕ್ಷಣ (MS) ಪಡೆದು ಪರಿಣತಿ ಗಳಿಸಿದರು.
ವೈದ್ಯಕೀಯ ವೃತ್ತಿಯನ್ನು ತುಮಕೂರಿನಲ್ಲಿ ಆರಂಭಿಸಿದ ಡಾ. ಶ್ರೀನಿವಾಸ್ ಎನ್. ಟಿ. ಅವರು, ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಸಮರ್ಪಿತ ನೇತ್ರ ಚಿಕಿತ್ಸಾ ಸಂಸ್ಥೆಯಾದ ಅಕ್ಷರಾ ಐ ಫೌಂಡೇಶನ್ ಅನ್ನು ಸ್ಥಾಪಿಸಿ, ನೇತ್ರ ಚಿಕಿತ್ಸಾ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ.
ವಿಶೇಷವಾಗಿ, ಕೂಡ್ಲಿಗಿ ಹಾಗೂ ಸುತ್ತಮುತ್ತಲಿನ ತಾಲೂಕುಗಳ ಜನರಿಗೆ ಉಚಿತ ನೇತ್ರ ಚಿಕಿತ್ಸೆಯನ್ನು ಒದಗಿಸುವ ಮೂಲಕ ಅವರು ಅಪಾರ ಜನಸೇವೆಯನ್ನು ಮಾಡಿದ್ದಾರೆ. ಇದುವರೆಗೆ 20,000ಕ್ಕೂ ಹೆಚ್ಚು ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳನ್ನು (Cataract Surgeries) ನೆರವೇರಿಸಿರುವ ಹೆಗ್ಗಳಿಕೆ ಇವರದ್ದಾಗಿದೆ. ಕೇವಲ ಶಸ್ತ್ರಚಿಕಿತ್ಸೆ ಮಾತ್ರವಲ್ಲದೆ, ಬಡ ಹಾಗೂ ಅಗತ್ಯವಿರುವ ಜನರಿಗೆ ಉಚಿತ ಸಾರಿಗೆ, ಊಟ, ವಸತಿ ಹಾಗೂ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವ ಮೂಲಕ ಮಾನವೀಯ ಸೇವೆಯ ಮಾದರಿಯಾಗಿದ್ದಾರೆ.
ಡಾ. ಶ್ರೀನಿವಾಸ್ ಎನ್. ಟಿ. ಅವರ ತಂದೆಯಾದ ದಿವಂಗತ ಎನ್. ಟಿ. ಬೊಮ್ಮಣ್ಣ ಅವರು 1985ರಿಂದ 1994ರವರೆಗೆ ಎರಡು ಬಾರಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ತಂದೆಯವರ ನಿಧನದ ನಂತರ, ಕ್ಷೇತ್ರದ ಜನರ ಒತ್ತಾಯ ಹಾಗೂ ಅಪಾರ ಪ್ರೀತಿಯಿಂದ ಡಾ. ಶ್ರೀನಿವಾಸ್ ಎನ್. ಟಿ. ಅವರು ರಾಜಕೀಯ ಪ್ರವೇಶಿಸಿದರು.
2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿ, 1,04,753 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದರು. ತಮ್ಮ ಮೊದಲ ಚುನಾವಣೆಯಲ್ಲೇ ಕಲ್ಯಾಣ ಕರ್ನಾಟಕ ಪ್ರದೇಶದಲ್ಲೇ ಅತಿ ಹೆಚ್ಚು ಅಂತರವಾದ 54,350 ಮತಗಳ ಅಂತರದಿಂದ ಜಯಗಳಿಸಿ, ವಿಶಿಷ್ಟ ದಾಖಲೆ ನಿರ್ಮಿಸಿದರು.
ಶಾಸಕರಾಗಿ ಆಯ್ಕೆಯಾದ ನಂತರದಿಂದಲೂ ಡಾ. ಶ್ರೀನಿವಾಸ್ ಎನ್. ಟಿ. ಅವರು ತಮ್ಮ ಕ್ಷೇತ್ರದ ಜನರ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಆರೋಗ್ಯ, ಶಿಕ್ಷಣ, ಮೂಲಭೂತ ಸೌಕರ್ಯಗಳು ಹಾಗೂ ಸ್ವಚ್ಛತೆ ಅವರ ಪ್ರಮುಖ ಆದ್ಯತೆಗಳಾಗಿವೆ. ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆಗೆ, ವೈದ್ಯಕೀಯ ಕ್ಷೇತ್ರದವರ ಸಮಸ್ಯೆಗಳಿಗೂ ಅವರು ಸದಾ ಧ್ವನಿಯಾಗಿದ್ದಾರೆ. ವೈದ್ಯರ ಪರವಾಗಿ ಸದಾ ನಿಂತು, ಅವರ ಸಮಸ್ಯೆಗಳನ್ನು ವಿಧಾನಸಭೆಯ ಒಳಗೂ ಹೊರಗೂ ಪ್ರಸ್ತಾಪಿಸಿ ಪರಿಹಾರಕ್ಕಾಗಿ ಶ್ರಮಿಸುತ್ತಿದ್ದಾರೆ.
ಇತ್ತೀಚೆಗೆ ಅವರು ಯಶಸ್ವಿನಿ ಯೋಜನೆಯ ದರ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ಯೋಜನೆಯ ಚಿಕಿತ್ಸಾ ದರಗಳನ್ನು ಪರಿಷ್ಕರಿಸುವ ಕುರಿತು ವರದಿಯನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು. ಈ ವರದಿಯ ಆಧಾರದ ಮೇಲೆ ಚಿಕಿತ್ಸಾ ದರಗಳಲ್ಲಿ ಗಮನಾರ್ಹ ಹೆಚ್ಚಳಕ್ಕೆ ಕಾರಣರಾಗಿದ್ದಾರೆ. ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಮನೋಭಾವ ಹೊಂದಿರುವ ಡಾ. ಶ್ರೀನಿವಾಸ್ ಎನ್. ಟಿ. ಅವರು 24×7 ಜನಸೇವೆಗೆ ಸದಾ ಸಿದ್ಧರಾಗಿರುವ ಜನಪ್ರತಿನಿಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.